ವಿಸೆಂಟಾ, ಷಿಲ್

ಸು.1465-1536. ಸ್ಪ್ಯಾನಿಷ್ ಮತ್ತು ಪೋರ್ಚು ಗೀಸ್ ಭಾಷೆಗಳ ನಾಟಕಕಾರ. ಇವನ ಜೀವನ ವಿವರಗಳು ಹೆಚ್ಚು ತಿಳಿದು ಬರುವುದಿಲ್ಲ. ಈತ ಸು.43 ಕೃತಿಗಳನ್ನು ಬರೆದಿದ್ದಾನೆ. ಇವುಗಳಲ್ಲಿ 11 ಸ್ಪ್ಯಾನಿಷ್‍ನಲ್ಲಿಯೂ ಮಿಕ್ಕವು ಪೋರ್ಚುಗೀಸ್‍ನಲ್ಲಿಯೂ ಇವೆ. ಆರಂಭದ ಕೃತಿಗಳಲ್ಲಿ ಜುವಾನ್ ದೆ ಏಂತೀನಾ ಎಂಬ ಲೇಖಕನ ಎಕ್ಲಾಗ್‍ಗಳ ಅನುಕರಣೆ ಕಂಡುಬರುತ್ತದೆ. ಬರೆವಣಿಗೆಯ ರೀತಿ ಇಟಲಿಯ ಪಾಸ್ಟರಲ್ (ಗೊಲ್ಲ) ಸಾಹಿತ್ಯದ ಅನುಕರಣೆಯಾದರೂ ಪಾತ್ರಗಳೂ ಸನ್ನಿವೇಶಗಳೂ ಪೋರ್ಚುಗೀಸ್ ಕೃಷಿಕ ಜೀವನದಿಂದ ನೈಜವಾಗಿ ಎತ್ತಿಕೊಂಡವಾಗಿದ್ದು ಮೃದು ಹಾಸ್ಯ ಮತ್ತು ಸುಂದರ ಭಾವಗೀತೆಗಳಿಂದ ಗಮನ ಸೆಳೆಯುತ್ತವೆ. ನಾಟಕಗಳ ಕಥಾಬಂಧ ಸರಳವಾಗಿದ್ದು ದೃಶ್ಯಗಳು ಬಿಡಿಬಿಡಿಯಾಗಿ ಜೋಡಿಸಿದಂತಿವೆ; ಆದರೆ ಸಂಭಾಷಣೆ ತಿಳಿಯಾಗಿಯೂ ಸ್ವಾರಸ್ಯಕರವಾಗಿಯೂ ಇದೆ. ಪಾತ್ರಗಳಲ್ಲಿ ಜೀವಕಳೆ ತುಂಬಿದೆ. 

	ಈತ ಬರೆದ ಔಟೊ ಎಂಬ ನೀತಿ ನಾಟಕವನ್ನು ಹೋಲುವ, ಕ್ರೈಸ್ತ ಪುರಾಣ ಕಥಾವಸ್ತುವಿನ ಕೆಲವು ನಾಟಕಗಳ ಕಲ್ಪನೆ ಆಶ್ಚರ್ಯಕರ ವಾಗಿದೆ. ಔಟೊ ಡಸ್ ಕ್ವಾಟ್ರೊ ಟೆಂಪೊಸ್ (1511) ಎಂಬ ಸ್ಪ್ಯಾನಿಷ್ ನಾಟಕದಲ್ಲಿ ಏಂಜಲ್ ಇತ್ಯಾದಿ ಕ್ರೈಸ್ತ ಪುರಾಣದ ದಿವ್ಯ ಪುರುಷರೂ ಗ್ರೀಕ್ ಪುರಾಣದ ಜೂಪಿಟರ್ ದೇವನೂ ಕುರುಬರ ವೇಷದಲ್ಲಿ ಬರುವ ಋತುದೇವತೆಗಳೂ ರಂಗಮಂಟಪದ ಮೇಲೆ ಬರುವರು. ದೈವಾಂಶವೇ ಶಿಶುವಾಗಿ ಜನ್ಮ ತಾಳಿರುವ ಯೇಸುಕ್ರಿಸ್ತನಿಗೆ ತಾವೆಲ್ಲರೂ ಆಜ್ಞಾನುವರ್ತಿಗ ಳಾಗುವೆವೆಂದು ಜೂಪಿಟರ್ ಘೋಷಿಸುವನು (1536ರಲ್ಲಿ ಲಿಸ್ಬನ್‍ನಲ್ಲಿ ಸ್ಥಾಪಿತವಾದ ಇನ್‍ಕ್ವಿಸಿಷನ್‍ಗೆ ಇದು ಅಸಹನೀಯವಾಯಿತು). ಔಟೊದಾ ಸೀಬೀಲ್ಯ ಕಾಸಾಂಡ್ರಾ ಎಂಬ ಸ್ಪ್ಯಾನಿಷ್ ನಾಟಕದಲ್ಲಿ ಕಾಸಾಂಡ್ರಾ ಒಬ್ಬ ಹಳ್ಳಿಯ ಹೆಣ್ಣು. ತನ್ನನ್ನು ವರಿಸಿದ ಸಾಲಮನ್ ಎಂಬವನನ್ನು ಮದುವೆಯಾಗಲು ಒಪ್ಪಲಿಲ್ಲ. ಏಬ್ರಹಾಮ್, ಈಸೈಯ, ಮೋಸೆಸ್ ಎಂಬ ಮೂವರು ಚಿಕ್ಕಪ್ಪಂದಿರು ಒತ್ತಾಯಪಡಿಸಿದಾಗ ಅಂದಿನ ಪೋರ್ಚುಗೀಸ್ ಸಮಾಜ ಚೌಕಟ್ಟಿನಲ್ಲಿ ಹೆಣ್ಣಿಗೆ ವೈವಾಹಿಕ ಜೀವನದಲ್ಲಿ ಬರುವ ತೊಂದರೆಗಳನ್ನು ವಿವರಿಸಿ, ಕೊನೆಗೆ ತನಗೆ ಮದುವೆಯೇ ಇಷ್ಟವಿಲ್ಲವೆನ್ನುವಳು. ನಿಜವಾದ ಕಾರಣವೇನೆಂದರೆ ತನ್ನ ಗರ್ಭದಲ್ಲಿ ದೇವಪುತ್ರನೇ ಅವತರಿಸುವನೆಂಬ ನಂಬಿಕೆ, ಅದಕ್ಕಾಗಿ ತಾನು ಕನ್ಯೆಯಾಗಿ ಉಳಿಯಬೇಕೆಂಬ ಸಂಕಲ್ಪ.  ಅನಂತರ ತ್ರಿಕಾಲ ಜ್ಞಾನಿಗಳಾದ ಮೂವರು ಚಿಕ್ಕಮ್ಮಂದಿರೂ  ಈಸೈಯನೂ ಭವಿಷ್ಯ  ನುಡಿದು ಬಡವರ ಗೋಳು, ಚರ್ಚಿನ ದುರಾಚಾರ, ನ್ಯಾಯಕ್ಕೆ ಒದಗಿರುವ ಚ್ಯುತಿ ಇತ್ಯಾದಿ ಸನ್ನಿವೇಶವಿರುವುದರಿಂದ ಕ್ರಿಸ್ತನ ಪುನರವತಾರಕ್ಕೆ ಕಾಲ ಸನ್ನಿಹಿತವಾಗಿರು ವುದು ನಿಜವೆನ್ನುವರು. ಈ ನಾಟಕದ ಕಾಸಾಂಡ್ರಾ ಪಾತ್ರ ಆಸಕ್ತಿಯನ್ನೂ ಕುತೂಹಲವನ್ನೂ ಕೆರಳಿಸುವಂತೆ ಮೂಡಿಬಂದಿದೆ. 

	ಔಟೊ ದಾ ಬಾರ್ಕಾ ಗ್ಲೋರೀಯ (1519) ಎಂಬ ಇನ್ನೊಂದು ಸ್ಪ್ಯಾನಿಷ್ ಕೃತಿಯಲ್ಲಿ ಮೃತರು ಸ್ಟಿಕ್ಸ್ ನದೀತೀರಕ್ಕೆ ಬರುವರು; ನರಕಕ್ಕೆ ಕರೆದೊಯ್ಯಲು ಕ್ಯಾರನ್ (ಯಮದೂತ) ದೋಣಿಯಲ್ಲಿ ಕಾದಿರುವನು. ಆಚೆ ನರಕದ ದೃಶ್ಯಗಳು ಕಾಣಿಸುವುವು. ಮೃತರಾದ ದೊರೆಗಳು, ಪಾದ್ರಿಗಳು ಮುಂತಾದವರು ವಿವಿಧವಾಗಿ ಕೋಪ, ಆಕ್ಷೇಪ, ಪ್ರಾರ್ಥನೆಯಲ್ಲಿ ತೊಡಗುವರು. ಕ್ರೈಸ್ತ ಪ್ರಪಂಚದ ಪ್ರತಿಷ್ಠಿತರ ವಿಡಂಬನೆ ಈ ನಾಟಕದ ಮುಖ್ಯ ಉದ್ದೇಶ.				
			(ಎಮ್.ಕೆ.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ